ಭೂಕವಚಸಮಸ್ಥಿತಿ

 	ಭೂಕವಚದ ಸಮತೋಲವನ್ನು ಕಾಯ್ದಿಟ್ಟಿರುವ ಸ್ಥಿತಿ (ಐಸೊಸ್ಟೆಸಿ). ಈ ಪರಿಸ್ಥಿತಿಯಲ್ಲಿ ಭೂಕವಚದ ಸಮಸ್ಥಿತಿಯನ್ನು ಉತ್ಕರ್ಷಿಸಲು ಪ್ರವೃತ್ತವಾಗಿರುವ ಬಲಗಳು ಅದನ್ನು ಅವನತಗೊಳಿಸಲು ಇರುವ ಬಲಗಳ ಎದುರು ವರ್ತಿಸುತ್ತವೆ. ಡಟನ್ ಎಂಬ ಭೂವಿಜ್ಞಾನಿ ಭೂತೊಗಟೆಯ ಸ್ಥಿತಿ ಮತ್ತು ಶಕ್ತಿ ತಿಳಿಸಲು ಐಸೊಸ್ಟೆಸಿ ಎಂಬ ಪದ ಬಳಸಿದ (1889). ಇದಕ್ಕೂ ಮುಂಚಿತವಾಗಿ ಅಂದರೆ 1755ರಿಂದಲೂ ಭೂತೊಗಟೆಯ ಸಮತೋಲಸ್ಥಿತಿಯ ಬಗ್ಗೆ ವಿಜ್ಞಾನಿಗಳಿಗೆ ಅರಿವಿತ್ತು. 

	ಭೂಸಮತೋಲ ಎಂದರೆ ಭೂತೊಗಟೆಯ ವಿವಿಧ ಪ್ರದೇಶಗಳಲ್ಲಿ ಕಾಣಬರುವ ಸಮತೋಲ ವ್ಯವಸ್ಥೆ. ಇದರಿಂದ ಭೂಮಿಯ ಖಂಡಭಾಗಗಳು ಏಕೆ ಸಮುದ್ರದ ತಳದಿಂದ ಸರಾಸರಿ 5 ಕಿಮೀಗಳ ಎತ್ತರದಲ್ಲಿವೆ, ಪರ್ವತಸ್ತೋಮವಾಗಲಿ ಪ್ರಸ್ಥ ಭೂಮಿಯಾಗಲಿ ಅಕ್ಕಪಕ್ಕದ ಪ್ರದೇಶಗಳಿಗಿಂತಲೂ ಏಕೆ ಎತ್ತರದಲ್ಲಿವೆ ಎಂಬುದನ್ನು ತಿಳಿಯಬಹುದು. ಭೂತೊಗಟೆಯ ಶಕ್ತಿಯ ಬಗ್ಗೆ ತಿಳಿಯಲು ಭೂಕವಚ ಸಮಸ್ಥಿತಿಜ್ಞಾನ ಬಲು ಉಪಯುಕ್ತ. 

	ಮೊದಲ ನೋಟಕ್ಕೆ ಭೂತೊಗಟೆ ಬಲು ಶಕ್ತಿಯುತವಾಗಿದ್ದು ದೊಡ್ಡ ಪರ್ವತಗಳನ್ನು ಹೊರಬಲ್ಲದೆಂದು ಕಂಡುಬಂದರೂ ವಾಸ್ತವವಾಗಿ ಇದು ದುರ್ಬಲವಾಗಿದೆ ಎಂಬುದು ಭೂವಿಜ್ಞಾನಿಗಳ ಶೋಧನೆಯಿಂದ ತಿಳಿದುಬಂದಿದೆ. ಉದಾಹರಣೆಗೆ ಪ್ಲೀಸ್ಟೊಸೀನ್ ಕಾಲದಲ್ಲಿ ಭೂಧ್ರುವಪ್ರದೆಶಗಳಲ್ಲಿಯ ಹೆಚ್ಚು ವಿಸ್ತಾರವಾಗಿ ಕವಿದುಕೊಂಡಿದ್ದ ಮಂಜುಗಡ್ಡೆಗಳು ಸಂಕುಚಿತಗೊಂಡು ಹಿಂದಕ್ಕೆ ಸರಿದದ್ದರಿಂದ ಅಲ್ಲಿಯ ಭೂಭಾಗ ಮೇಲಕ್ಕೆ ಏರಿರುವುದಾಗಿ ಕಂಡುಬಂದಿದೆ. 

	ಭೂತೊಗಟೆಯನ್ನು ದೊಡ್ಡ ದೊಡ್ಡ ಹೋಳುಗಳಾಗಿ ಅಥವಾ ಖಂಡಗಳಾಗಿ ವಿಂಗಡಿಸಿ ಪ್ರತಿಯೊಂದು ಹೋಳನ್ನೂ ಅಕ್ಕಪಕ್ಕದ ಹೋಳುಗಳೊಂದಿಗೆ ಹೋಲಿಸಿದಾಗ ಆ ಹೋಳುಗಳು ಸಮಸ್ಥಿತಿಯಲ್ಲಿರುತ್ತವೆ ಎಂದು ಭಾವಿಸಬಹುದು. ಹೀಗಿರುವುದಕ್ಕೆ ಹೋಳುಗಳ ತಳದಲ್ಲಿಯ ತೂಕ ಒಂದೇ ಸಮವಾಗಿರುವುದು ಕಾರಣ ಎಂದು ಅಭಿಪ್ರಾಯಪಡಲಾಗಿದೆ. ಈ ಹೋಳುಗಳ ತಳದಲ್ಲಿಯ ಪದರಕ್ಕೆ ವ್ಯಾರಲ್ ಎಂಬ ಭೂವಿಜ್ಞಾನಿ ನಿಶ್ಯಕ್ತಿಗೋಳ (ಆಸ್ಥೆನೋಸ್ಫಿಯರ್) ಎಂಬ ಹೆಸರು ಕೊಟ್ಟಿದ್ದಾನೆ. ಈ ಪದರಕ್ಕೆ ಡಾಮರು ಅಥವಾ ಪಿಚ್ ಎಂಬ ವಸ್ತುವಿಗಿರುವ ಭೌತಗುಣಗಳಿವೆ. ಇದರ ಮೇಲೆ ಹೊರಚಿಪ್ಪಿನ ತುಂಡುಗಳು ತೇಲುತ್ತಿವೆ. ತೇಲುವ ತುಂಡುಗಳ ವಿಸ್ತಾರ 160 ಚಕಿಮೀ ಎಂಬುದು ಒಂದು ಅಂದಾಜು. 

	ತೇಲುತ್ತಿರುವ ತುಂಡುಗಳ ಸಾಂದ್ರತೆ ಅವುಗಳ ಎತ್ತರಕ್ಕೆ ಪ್ರತಿಲೋಮಾನುಪಾತದಲ್ಲಿದೆಯೆಂದು ಹೆ ಫರ್ಡ್ ಮತ್ತು ಬಾವಿ ಎಂಬ ಭೂವಿಜ್ಞಾನಿಗಳು ತಿಳಿಸಿದ್ದಾರೆ. ಅಂದರೆ ಭೂಮಿಯ ಮೇಲೆ ಬಲು ಎತ್ತರಕ್ಕೆ ಚಾಚಿಕೊಂಡಿರುವ ಪರ್ವತ ಸ್ತೋಮಗಳಲ್ಲಿಯ ವಸ್ತು ಹಗುರವಾಗಿರುವುದೆಂದೂ ತಗ್ಗಿನಲ್ಲಿರುವ, ಇಲ್ಲವೇ ಸಮುದ್ರ ತಳದ ಭೂಭಾಗದಲ್ಲಿಯ ವಸ್ತು, ಹೆಚ್ಚು ಭಾರದಿಂದ ಕೂಡಿರುತ್ತದೆಂದೂ ಅರ್ಥ. ಇದರ ಸಮರ್ಥನೆಗಾಗಿ ಪಿ ರೆಬೋಜರ್ ಎಂಬ ಭೂವಿಜ್ಞಾನಿ ದಕ್ಷಿಣ ಅಮೆರಿಕದ ಆಂಡಿಸ್ ಪರ್ವತದ ಸಮೀಕ್ಷೆ ನಡೆಸಿದ (1735). ಇಷ್ಟಾದರೂ ಪರ್ವತದ ತಳಭಾಗದ ವಸ್ತು ಹಗುರವಾಗಿಯೇ ಇದೆ ಎಂಬುದನ್ನು ಒಪ್ಪಿಕೊಳ್ಳಲು ಇತರ ವಿಜ್ಞಾನಿಗಳು ಹಿಂಜರಿದರು. ಹತ್ತೊಂಬತ್ತನೆಯ ಶತಮಾನದ ಕೊನೆಯ ಭಾಗದ ವೇಳೆಗೆ ಭಾರತದ ಸರ್ವೇಯರ್ ಜನರಲ್ ಆಗಿದ್ದ ಜಾರ್ಜ್ ಎವರೆಸ್ಟ್ ಹಿಮಾಲಯ ಪ್ರದೇಶದಲ್ಲಿ ಸಮೀಕ್ಷೆ ನಡೆಸುತ್ತಿದ್ದಾಗ ತೂಕದ ಗುಂಡನ್ನು ಬಳಸುತ್ತಿದ್ದ ಸನ್ನಿವೇಶದಲ್ಲಿ, ಕೆಲವು ನ್ಯೂನತೆಗಳನ್ನು ಗಮನಿಸಿದ. ಹಿಮಾಲಯದ ತಪ್ಪಲಿನ ಕಲ್ಯಾಣ ಎಂಬ ಪ್ರದೇಶದಲ್ಲಿ ಮಾಡಿದ ಅಳತೆಗೂ ಅದಕ್ಕೆ ಸುಮಾರು 96 ಕಿಮೀ ದಕ್ಷಿಣದ ಕಲ್ಯಾಣಪುರ ಎಂಬ ಪ್ರದೇಶದಲ್ಲಿ ಮಾಡಿದ ಈ ಅಳತೆಗೂ ವ್ಯತ್ಯಾಸ ಕೇವಲ 5.236″ ಕೋನಸೆಕೆಂಡ್ ಇತ್ತು. ಗಣಿತದ ಪ್ರಕಾರ ವ್ಯತ್ಯಾಸ 15.885 ಕೋನಸೆಕೆಂಡ್ ಇರಬೇಕಾಗಿತ್ತು. ಈ ಸಮಸ್ಯೆಯನ್ನು ಆಗ ಇಂಗ್ಲೆಂಡಿನಲ್ಲಿ ಆಸ್ಥಾನ ಭೌತಗಣಿತವಿದನಾಗಿದ್ದ ಸರ್ ಜಾರ್ಜ್ ಏರಿ ಎಂಬವ ಪರ್ವತ ಸ್ತೋಮ ತಳಭಾಗದ ವಸ್ತುವಿನಲ್ಲಿ ತೇಲುತ್ತಿರುವುದೆ ಈ ವ್ಯತ್ಯಾಸಕ್ಕೆ ಕಾರಣ ಎಂದು ತಿಳಿಸಿದ(1855). ಇದರಿಂದಾಗಿ ಪರ್ವತಗಳು ಹಾಗೂ ಎತ್ತರದ ಪ್ರದೇಶಗಳು ಮೇಲ್ಚಾಚಿ ನಿಂತಿರುವುದಕ್ಕೆ ಇರುವ ಕಾರಣ ಸ್ಪಷ್ಟವಾಯಿತು. 

	ಪರ್ವತಸ್ತೋಮಗಳು ತೇಲುವ ವಿಷಯದಲ್ಲಿ ಎರಡು ಅಭಿಪ್ರಾಯಗಳು ಉಂಟಾದವು; ಪ್ರಾಟ್ ಅಭಿಪ್ರಾಯ; ಸರ್ ಜಾರ್ಜ್ ಏರಿ ಅಭಿಪ್ರಾಯ. ಪ್ರಾಟನ ಪ್ರಕಾರ ಸುಮಾರು 40-64 ಕಿಮೀ ಆಳದಲ್ಲಿರುವ ಒಳ ಪದರದ ಘನರೂಪದ ವಸ್ತು ಭಾರವಾಗಿದ್ದು ಹೆಚ್ಚು ಮೆತುಮಾಗಿರುವುದು. ಇದರ ಮೇಲೆ ತೇಲುವ ವಿವಿಧ ಭೂಭಾಗದ ತುಂಡುಗಳು ವಿವಿಧ ಸಾಂದ್ರತೆ ಹೊಂದಿರುತ್ತವೆ. ಆದರೂ ಪ್ರತಿಯೊಂದರ ತೂಕವೂ ಒಂದಕ್ಕೊಂದು ಸಮ. ಇದರಿಂದ ಕಡಿಮೆಸಾಂದ್ರತೆಯ ತುಂಡು ಹೆಚ್ಚು ಎತ್ತರವಾಗಿದ್ದು ಒಂದು ಮಟ್ಟದಿಂದ ಹೆಚ್ಚಿಗೆ ಮೇಲಕ್ಕೆ ಚಾಚಿಕೊಂಡಿರುವುದು. ಇದಕ್ಕೆ ಪ್ರತಿಯಾಗಿ ಅಧಿಕ ಸಾಂದ್ರತೆಯ ತುಂಡು ಕಡಿಮೆ ಎತ್ತರವಾಗಿದ್ದು ಅದೇ ಮಟ್ಟದಿಂದ ಕಡಿಮೆ ಎತ್ತರಕ್ಕೆ ಚಾಚಿಕೊಂಡಿರುತ್ತದೆ. 

	ಏರಿಯ ಅಭಿಪ್ರಾಯ ತದ್ವಿರುದ್ಧವಾಗಿದೆ. ಇದರ ಪ್ರಕಾರ ಭೂಮಿಯ ಹೊರ ಚಿಪ್ಪಿನ ಹೋಳುಗಳ ಸಾಂದ್ರತೆ ಒಂದೇ ಆಗಿದೆ. ಅವು ವಿವಿಧ ಎತ್ತರಗಳವಾಗಿದ್ದು ಒಳಪದರದಲ್ಲಿ ತೇಲುವಾಗ ಹೆಚ್ಚು ಎತ್ತರದ ಹೋಳು ಹೆಚ್ಚಿನ ಆಳಕ್ಕೂ ಕಡಿಮೆ ಎತ್ತರದ ಹೋಳು ಅಥವಾ ತುಂಡು, ಕಡಿಮೆ ಆಳಕ್ಕೂ ಕಂತಿರುತ್ತವೆ. ಈ ಸಿದ್ಧಾಂತವನ್ನು ನೀರಿನ ಮೇಲೆ ತೇಲುವ ಮಂಜುಗಡ್ಡೆಗಳಿಗೆ ಅನ್ವಯಿಸಲಾಗಿದೆ. ಪರ್ವತಗಳಿಗೆ ಬೇರುಗಳಿವೆಯೆಂಬ ಸಂಗತಿ ಇದರಿಂದ ಸ್ಪಷ್ಟವಾಯಿತು. ಇದರ ಮೇರೆಗೆ ಹೋಳುಗಳ ಸಾಂದ್ರತೆ ಒಂದೇ ಇದ್ದು ಅವು ಒಳಗೆ ವ್ಯಾಪಿಸಿರುವ ಮಟ್ಟ ಮಾತ್ರ ಭಿನ್ನ ಭಿನ್ನವಾಗಿರುತ್ತದೆ. ಪ್ರಾಟ್ ಮತ್ತು ಏರಿ ಸಿದ್ಧಾಂತಗಳ ಬಗ್ಗೆ ಬಹಳಷ್ಟು ಚರ್ಚೆ ನಡೆದಿದೆ. ಕೆಲವು ಕಾಲ ಪ್ರಾಟನ ಸಿದ್ಧಾಂತವೇ ಸರಿ ಎನ್ನುವ ಅಭಿಪ್ರಾಯ ಇತ್ತು. ಆದರೆ ಈಚಿನ ದಿನಗಳಲ್ಲಿ ಏರಿ ಸಿದ್ಧಾಂತವೇ ಹೆಚ್ಚು ಸಮಂಜಸ ಎಂದು ಭಾವಿಸಲಾಗಿದೆ. ಈ ಸಿದ್ಧಾಂತವನ್ನು ಹೈಸ್ಕನಿನ್ ಮೊದಲಾದ ಭೂಭೌತವಿಜ್ಞಾನಿಗಳು ಸಮರ್ಥಿಸಿದ್ದಾರೆ. 

	ಸಮತೋಲಸ್ಥಿತಿಯಿಂದ ಭೂಮಿಯ ಮೇಲಣ ಕೆಲವು ಚಟುವಟಿಕೆಗಳನ್ನು ಸುಲಭವಾಗಿ ಅರ್ಥ ಮಾಡಿಕೊಳ್ಳಬಹುದು. ಭೂಮಿಯ ಮೇಲೆ ಒಂದು ಪ್ರದೇಶದಲ್ಲಿ ದೀರ್ಘಕಾಲ ಸವೆತ ಉಂಟಾದಲ್ಲಿ ಅಲ್ಲಿಯ ಹೋಳಿನ ತೂಕ ಕಡಿಮೆಯಾಗುವುದು ಮತ್ತು ಇನ್ನೊಂದು ಪ್ರದೇಶದಲ್ಲಿ ಅಂದರೆ ಸಾಮಾನ್ಯವಾಗಿ ಸಮುದ್ರದ ತಳದಲ್ಲಿ ಈ ಸವೆತದಿಂದ ಉಂಟಾದ ವಸ್ತುಗಳು ವಿಶೇಷವಾಗಿ ಸಂಗ್ರಹವಾಗುವುವು. ಇದರಿಂದ ಆ ಪ್ರದೇಶದ ಹೋಳಿನ ತಳದಲ್ಲಿ ತೂಕ ಹೆಚ್ಚಾಗುವುದು. ಆಗ ಹೋಳು ಆಳಕ್ಕೆ ಇಳಿಯುತ್ತದೆ. ಒಳಪದರದಲ್ಲಿ ಚಲನೆಯುಂಟಾಗಿ ಅದರಲ್ಲಿಯ ವಸ್ತು ಪಕ್ಕಕ್ಕೆ ತಳ್ಳಲ್ಪಡುವುದು. ಹೀಗೆ ತಳ್ಳಲ್ಪಟ್ಟ ವಸ್ತು ಸವೆತ ಹೊಂದಿದ ಹೋಳಿನ ತಳಕ್ಕೆ ಬಂದು ಆ ಹೋಳನ್ನು ಮೇಲಕ್ಕೆ ಎತ್ತುವುದು. ಈ ಕಾರ್ಯಾಚರಣೆಯಿಂದ ಸಮತೋಲನ ಮತ್ತೆ ಸ್ಥಾಪಿಸಲ್ಪಡುವುದು. ನದಿ ಉಗಮಸ್ಥಳಗಳ ಮೇಲೇರಿಕೆ, ಉತ್ತರಧ್ರುವ ಪ್ರದೇಶಗಳಲ್ಲಿಯ ಮಂಜುಗಡ್ಡೆಗಳ ಹಿಂಚಲನೆಯಿಂದ ಭೂಮಿ ಮೇಲಕ್ಕೆ ಎದ್ದಿರುವುದು ಇತ್ಯಾದಿ ಇದಕ್ಕೆ ನಿದರ್ಶನಗಳು. 							  
      (ಎಂ.ಎಸ್.ಎಸ್‍ಎಚ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ